ಫೇಸ್ ಮಾಸ್ಕ್ ಮೂಲಕ ಸಂವಹನ ಸಾಧ್ಯ..! ಅಷ್ಟಕ್ಕೂ ಅದು ಹೇಗೆ ಗೊತ್ತಾ..?
ಜಗತ್ತು ಇಂದು ತಂತ್ರಜ್ಞಾನದ ವಿಚಾರದಲ್ಲಿ ಅಗೀ ವೇಗವಾಗಿ ಬೆಳೆಯುತ್ತಿರುವುದರಿಂದ ಸಂದರ್ಭಕ್ಕೆ ಅನುಸಾರವಾಗಿ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿದೆ. ಅದೇರೀತಿ ಇಂದಿನ ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಸಾಕಷ್ಟು ತಂತ್ರಜ್ಞಾನಗಳ ಅನ್ವೇಷಣೆಯನ್ನು ಮಾಡಿ ಅವುಗಳನ್ನು ಕೊರೋನಾ ವೈರಸ್ ತಡೆಯುವಿಕೆಯಲ್ಲಿ ಬಳಸಲಾಗುತ್ತಿದೆ ಹಾಗೂ ಅದರ ಬಳಕೆಯಾಗುತ್ತಿದೆ ಅದರಂತೆಯೇ ಕೊರೋನಾ ಸಂದರ್ಭದಲ್ಲಿ ಮತ್ತೊಂದು ಉಪಕರಣವನ್ನು ಸಂಶೋಧಿಸಲಾಗಿದೆ. ಇದರಿಂದ ಮುಖಾಮುಖಿ ನಿಂತು ಸಂವಹನವನ್ನು ಮಾಡುವಂತಹ ವ್ಯಕ್ತಿಗಳಿಗೆ ಅನುಕೂಲವಾಗುತ್ತದೆ. ಅಷ್ಟಕ್ಕೂ ಆ ಉಪಕರಣ ಯಾವುದು ಗೊತ್ತಾ..?
ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬಗೆಯ ಮಾಸ್ಕ್ಗಳಿಗೆ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ಇದೆ. ಆದರೆ, ಮಾಸ್ಕ್ ಹಾಕಿಕೊಂಡಾಗ ಆ ವ್ಯಕ್ತಿ ಮಾತನಾಡುತ್ತಿದ್ದಾನೋ, ನಗುತ್ತಿದ್ದಾನೋ ಎಂಬುದೇ ಗೊತ್ತಾಗುವುದಿಲ್ಲ. ಜನರ ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಅಮೆರಿಕದ ಕ್ಯಾಲಿಫೋರ್ನಿಯಾದ ಗೇಮ್ಸ್ ಡೆವೆಲಪರ್ ಟೈಲರ್ ಗ್ಲಾಯಿಲ್ ಧ್ವನಿನಿಯಂತ್ರಿತ ಫೇಸ್ ಮಾಸ್ಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಮಾಸ್ಕ್ನಲ್ಲಿ ಮಿನಿ ಕಂಪ್ಯೂಟರ್ ಅಳವಡಿಸಿರುವ ಅವರು, ಮಾಸ್ಕ್ನ ಹೊರಭಾಗದಲ್ಲಿ ಬಾಯಿಯಾಕಾರದ ಎಲ್ಇಡಿ ದೀಪಗಳ ಸಾಲುಗಳನ್ನು ಅಳವಡಿಸಿದ್ದಾರೆ. ಇದನ್ನು ಧರಿಸಿರುವವರು ಮಾತನಾಡುವಾಗ ಅವರ ತುಟಿ ಚಲನೆಯನ್ನು ಆಧರಿಸಿ ಎಲ್ಇಡಿ ಲೈಟ್ಗಳು ಕೂಡ ಚಲಿಸುತ್ತವೆ. ನಾಲಿಗೆಯಲ್ಲಿ ಶಬ್ಧ ಮಾಡಿದರೆ, ನಗುತ್ತಿರುವ ರೀತಿಯಲ್ಲಿ ಎಲ್ಇಡಿ ಲೈಟ್ಗಳು ಬೆಳಗಿ, ಮಾಸ್ಕ್ಧಾರಿ ನಗುತ್ತಿರುವುದನ್ನು ತಿಳಿಸುತ್ತವೆ.
ತುಟಿಚಲನೆಯನ್ನು ಆಧರಿಸಿ ಎಲ್ಇಡಿ ದೀಪಗಳನ್ನು ಬೆಳಗಿಸುವ ಮಾಸ್ಕ್ಗಳ ಬಗ್ಗೆ ಇಂಟರ್ನೆಟ್ನಲ್ಲಿ ತಡಕಾಡಿದೆ. ಆದರೆ, ಇಂಥ ಯಾವುದೇ ಮಾಸ್ಕ್ಗಳು ಇಲ್ಲದಿರುವುದು ಖಚಿತಪಟ್ಟಿತು. ಆದ್ದರಿಂದ, ಅಂಥ ಒಂದು ಮಾಸ್ಕ್ ಅನ್ನು ವಿನ್ಯಾಸಗೊಳಿಸಲು ಮುಂದಾದೆ ಎಂದು ಖಾಸಗಿ ಟಿವಿ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಟೈಲರ್ ಹೇಳಿದ್ದಾರೆ.
ಎಲ್ಇಡಿ ಮ್ಯಾಟ್ರಿಕ್ಸ್, ಸಣ್ಣದೊಂದು ಮೈಕ್ರೋಫೋನ್, ಒಂದಷ್ಟು ವೈರ್ಗಳು, ಕನ್ವರ್ಟರ್, ರೆಸಿಸ್ಟರ್ ಮತ್ತು ಕೆಪಾಸಿಟರ್ಗಳನ್ನು ಬಳಸಿ ಮಾತನಾಡುವ ಮಾಸ್ಕ್ ಅನ್ನು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ.
ಈ ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ಒಂದು ತಿಂಗಳು ಈ ಮಾಸ್ಕ್ ಅನ್ನು ಸ್ವತಃ ತಾವೇ ಧರಿಸಿ, ಆಮೂಲಾಗ್ರವಾಗಿ ಪರೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಆರ್ಡ್ಯುಯಿನೋ ನ್ಯಾನೋ ಎಂಬ ಪ್ರೋಗ್ರಾಮಬಲ್ ಮೈಕ್ರೋಕಂಪ್ಯೂಟರ್ ಆಧಾರಿತವಾದ ಈ ಮಾಸ್ಕ್ನ ನಿರ್ಮಾಣದ ವಿವರಗಳನ್ನು ಅವರು ಪ್ರಕಟಿಸಿದ್ದಾರೆ.